ePaper
PoliticsBusinessEducationTechnologyEntertainmentSportsHealthFeatureTravelingBeauty TipsRecipes Tips

ಶಾಸಕಿಯನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ ಕಾಂಗ್ರೆಸ್‌

Advertisement

ಕಾಂಗ್ರೆಸ್ ಪಕ್ಷ ಒಡಿಶಾದ ಬಾರಾಬತಿ-ಕಟಕ್ ಕ್ಷೇತ್ರದ ಶಾಸಕಿ ಸೋಫಿಯಾ ಫಿರ್ದೌಸ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ. ಸೋಫಿಯಾ ಫಿರ್ದೌಸ್ ಒಡಿಶಾ ರಾಜ್ಯದ ಮೊದಲ ಮುಸ್ಲಿಂ ಶಾಸಕಿಯಾಗಿದ್ದರು.

ಸೋಫಿಯಾ ಫಿರ್ದೌಸ್ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ, ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಕಾರಣಕ್ಕೆ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಸೋಫಿಯಾ ಫಿರ್ದೌಸ್ ಅವರಿಗೆ ಬೆಂಗಳೂರು ನಗರದ ನಂಟಿದ್ದು, ಅವರು ಓದಿದ್ದು, ಉದ್ಯಾನ ನಗರಿಯಲ್ಲಿ.

ಸೋಮವಾರ ರಾಜ್ಯಸಭೆ ಚುನಾವಣೆ ನಡೆದಿತ್ತು. ಮಂಗಳವಾರ ಕಾಂಗ್ರೆಸ್ ಪಕ್ಷ ಮೂವರು ಶಾಸಕರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಿ ಆದೇಶವನ್ನು ಹೊರಡಿಸಿದೆ. ಇವರಲ್ಲಿ ಸೋಫಿಯಾ ಫಿರ್ದೌಸ್ ಸಹ ಸೇರಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ ಚಲಾಯಿಸಿದ ಕಾರಣಕ್ಕಾಗಿ ಸಾನಾ ಖೇಮುಂಡಿ ಶಾಸಕ ರಮೇಶ್ ಜೆನಾ, ಬಾರಾಬತಿ ಕಟಕ್ ಶಾಸಕಿ ಸೋಫಿಯಾ ಫಿರ್ದೌಸ್ ಮತ್ತು ಮೋಹನ ಶಾಸಕ ದಶರಥ್ ಗಮಾಂಗೊ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪಕ್ಷ ಹೇಳಿದೆ.

ಒಡಿಶಾ ಕಾಂಗ್ರೆಸ್ ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ ಚಲಾಯಿಸಬಹುದು ಎಂಬ ಅನುಮಾನದ ಹಿನ್ನಲೆಯಲ್ಲಿ 8 ಶಾಸಕರನ್ನು ಬೆಂಗಳೂರು ಹೊರವಲಯದ ರೆಸಾರ್ಟ್‌ಗೆ ಕಳಿಸಿತ್ತು.

ಆದರೆ ಸೋಮವಾರ ಮೂವರು ಶಾಸಕರು ಅಡ್ಡ ಮತದಾನ ಮಾಡಿದ್ದು, ಪಕ್ಷಕ್ಕೆ ಮುಜುಗರ ಉಂಟಾಗಿದೆ. ಆದ್ದರಿಂದ ಮೂವರು ಶಾಸಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಛಾಟನೆ ಮಾಡಿ ಆದೇಶವನ್ನು ಹೊರಡಿಸಲಾಗಿದೆ.

ಒಡಿಶಾ ರಾಜ್ಯದ ಮೂರು ರಾಜ್ಯಸಭಾ ಸ್ಥಾನಗಳಿಗೆ ಸೋಮವಾರ ಚುನಾವಣೆ ನಡೆದಿತ್ತು. ಮೂರು ಸೀಟುಗಳನ್ನು ಎನ್‌ಡಿಎ ಮೈತ್ರಿಕೂಟ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದಕ್ಕೆ ಕಾಂಗ್ರೆಸ್ ಶಾಸಕರ ಅಡ್ಡ ಮತದಾನ ಸಹಾಯಕವಾಗಿತ್ತು.

ಸೋಫಿಯಾ ಫಿರ್ದೌಸ್: ಬಾರಾಬತಿ-ಕಟಕ್ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೋಫಿಯಾ ಫಿರ್ದೌಸ್ ಹೆಸರು ಒಡಿಶಾದ ರಾಜಕೀಯ ಇತಿಹಾಸ ಪುಸ್ತಕಗಳಲ್ಲಿ ದಾಖಲಾಗಿದೆ. ಅವರು ಒಡಿಶಾ ವಿಧಾನಸಭೆಗೆ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳಾ ಶಾಸಕಿ.

ವಿಧಾನಸಭೆ ಚುನಾವಣೆಯಲ್ಲಿ ಅವರು ಬಿಜೆಪಿಯ ಪೂರ್ಣ ಚಂದ್ರ ಮಹಾಪಾತ್ರ ಅವರನ್ನು 8,001 ಮತಗಳ ಅಂತರದಿಂದ ಸೋಲಿಸಿ, ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದರು. ಈಗ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿದ್ದಾರೆ.

ಸೋಫಿಯಾ ಫಿರ್ದೌಸ್ ರಾಜಕೀಯ ಕುಟುಂಬದಿಂದ ಬಂದವರು. ಅವರು ಹಿರಿಯ ಕಾಂಗ್ರೆಸ್ ನಾಯಕಿ ಮೊಹಮ್ಮದ್ ಮೋಕಿಮ್ ಅವರ ಪುತ್ರಿ. 2024ರ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಮೋಕಿಮ್ ಅವರ ಬದಲು ಅವರ ಪುತ್ರಿ ಸೋಫಿಯಾ ಫಿರ್ದೌಸ್ ಅವರಿಗೆ ಟಿಕೆಟ್ ನೀಡಿತ್ತು.

ಸೋಫಿಯಾ ಫಿರ್ದೌಸ್ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯಿಂದ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅವರು 2022 ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನಲ್ಲಿಯೂ ವ್ಯಾಸಂಗ ಮಾಡಿದ್ದರು.

Advertisement
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

SEND NEWS ePaper SHARE
LATEST